ಮಳೆಗಾಲ : ಹಿಂಗೆ ಒಂದು ನೆನಪು
ಅವತ್ತು ಯಾಕೋ ಒಂಥರಾ ಬೋರಾಗ್ತಾ ಇತ್ತು ಅಣ್ಣ ಏನೋ
ಎಕ್ಸಾಮ್ ಗೆ ಓದ್ಕೊತ್ತಿದ್ದ,ಅಪ್ಪ ಮನೇಲಿರ್ಲಿಲ್ಲ, ಅಮ್ಮ ಅಡಿಗೆ ಮಾಡ್ತಾ ಇದ್ರು ಪಕ್ಕದ್ಮನೆ ತಮ್ಮ
ತಂಗಿನೆಲ್ಲ ಕರ್ಕೊಂಡು ಸೈಕಲ್ ಸವಾರಿ ಹೋಗೋಣ ಅಂದ್ರೆ ನೆಲ ಕಿತ್ತು ಬರುತ್ತೆ ಅನ್ನಷ್ಟು ಜೋರು
ಮಳೆ ಆಕಡೆ ಟಿವಿ ನೋಡಣ ಅಂತ ಆನ್ ಮಾಡಿದ್ರೆ ಮಹಾಮಾರಿ ಕೊರೋನ, ಕೊರೋನ ಮಹಾಸ್ಪೋಟ ಅಂತ ಮೈಮೇಲೆ ಎಗರಿ ಬರ್ತಾರೆ ಅನ್ನಂಗೆ ಟಿವಿ ನ್ಯೂಸ್ ಅವರು
ಅರಚ್ಕೋತಿದ್ರು. ಅದನ್ನೂ ಆಫ್ ಮಾಡಿ ಇನ್ನೇನು ಮಾಡೋದು ಅಂತ ಹೇಳಿ ಮನೆ ಮುಂದಿನ ಪೋರ್ಟಿಕೋಗೆ
ಬಂದು ಕಾಲು ಚಾಚ್ಕೊಂಡು ಚೇರ್ ಮೇಲೆ ಒರ್ಕೊಂಡು ಹಾಗೆ ಕಣ್ಮುಚ್ದೆ ಗಾಳಿ ಜೊತೆ ತೇಲಿಬಂದು ನನ್ನ
ಮುಖದ ಮೇಲೆ ಬಿದ್ದ ಮಳೆ ಹನಿಗಳು ನನ್ನನ್ನ ಕರ್ಕೊಂಡು ಹೋಗಿದ್ದು ನನ್ನ ಬಾಲ್ಯದ, ಅದ್ರಲ್ಲೂ ಮಳೆಗಾಲದ ದಿನಗಳಿಗೆ. ಜೋರು ಮಳೇಲಿ ಒಂದುವರೆ
ಕಿಲೋಮೀಟರ್ ನಡ್ಕೊಂಡು ಶಾಲೆಗೆ ಹೋಗುವಾಗ ಎಷ್ಟು ಬೇಜಾರಾಗ್ತಿತ್ತೋ(ಬಹುಶಃ ಶಾಲೆಗೆ ಖುಷಿಯಿಂದ
ಹೋಗೋ ಮಕ್ಳನ್ನ ಹುಡ್ಕೋದು ಮರುಭೂಮಿಲಿ ಓಯಸಿಸ್ ಹುಡ್ಕೋ ಹಾಗೆ ಅನ್ಸುತ್ತೆ) ಆ ಬೇಜಾರು ಮುರಿದು
ಹೋಗೋ ಅಷ್ಟು ಮಜಾ, ಖುಷಿ ಜೋರು ಮಳೇಲಿ ವಾಪಾಸು ಬರುವಾಗ ಸಿಗ್ತಿತ್ತು.
ಸಮವಯಸ್ಸಿನ ಒಂದು ಮಕ್ಕಳ ಮರಿ ಸೈನ್ಯನೇ ನಮ್ಮಲ್ಲಿದ್ಮೇಲೆ ಕೇಳ್ಬೇಕಾ.
![]() |
ಮನೇವ್ರ ಒತ್ತಾಯಕ್ಕೇನೋ ಛತ್ರಿ ತಗೊಂಡು ಹೋಗ್ತಿದ್ವಿ, ಆದ್ರೆ ಆ ಛತ್ರಿ ಎಲ್ಲಿ ಮಳೇಲಿ ನೆಂದು ಒದ್ದೆ ಆಗಿ
ಅದುಕ್ಕೆ ಚಳಿ ಆಗುತ್ತೋ ಅನ್ನಂಗೆ ಅದನ್ನ ಭದ್ರಮಾಡಿ ಬ್ಯಾಗೊಳಗೆ ಹಾಕೊಂಡು ನಾವು ಮಳೇಲಿ
ಕುಣ್ಕೊಂಡು, ಹಾರ್ಕೊಂಡು
ಬರ್ತಿದ್ವಿ. (ಆ ಜೋರು ಗಾಳಿ ಮಳೇಲಿ ಛತ್ರಿ ಉಪಯೋಗ ಏನು ಅಂತ ಗೊತ್ತಾಗ್ತಿದ್ದದ್ದು
ಸ್ವಲ್ಪ ಕಷ್ಟನೆ). ಮಳೆ ಸ್ವಲ್ಪ ನಿಲ್ತು ಅನ್ನೋವಾಗ ರಸ್ತೆ ಅಕ್ಕಪಕ್ಕ ಇರ್ತಿದ್ದ ಗಿಡಗಳನ್ನ
ಅಲ್ಲಾಡ್ಸಿ ಅದ್ರ ಮೇಲೆ ನಿತ್ತಿರ್ತಿದ್ದ
ಮಳೆಹನಿಗಳನ್ನ ಪಕ್ಕದಲ್ಲಿದ್ದವ್ರ ಮೇಲೆ ಹಾರಿಸಿ ಅಲ್ಲೇ ಕಾಣ್ತಿದ್ದ ಗುಂಡಿ,ಹೊಂಡಗಳಲ್ಲಿನ ನೀರಿಗಿಳ್ದು ಕೈಕಾಲ್ನೆಲ್ಲಾ ಕೆಸರು
ಮಾಡ್ಕೊಂಡು ಮನೆಗೆ ಬಂದರೆ ಅಲ್ಲಿ ಬಿಸಿನೀರು ತಯಾರಿರ್ತಿತ್ತು. ಸ್ಸ್ನಾನ ಮುಗ್ಸಿ ಬರ್ತಿದ್ದಂಗೆ
ಗೇರು ಬೀಜಗಳನ್ನು ಸುಡೋ ಕಾರ್ಯಕ್ರಮ ಪ್ರಾರಂಭ. ಒಲೇಲಿ ಬೆಂಕಿ ಕೆಂಡದಲ್ಲಿ ಸುಡ್ತಿದ್ದ
ಬೀಜಗಳಲ್ಲಿ ಸುಮಾರಷ್ಟು ಕರಕಲಾಗ್ತಿದ್ವು, ಇನ್ನಷ್ಟು
ಹಾಳಾಗ್ತಿದ್ವು. ಕೊನೆಗೆ ನಮ್ಮ ಕೈಗೆ ಸಿಕ್ತಿದ್ದ ಒಂದೋ ಎರಡೋ ಗೇರುಪೀಠಕ್ಕಾಗಿ ನಾವೆಲ್ಲ ಪ್ರಾಣ
ಬಿಡ್ತಿದ್ವಿ.ಇನ್ನು ಪ್ರಾರಂಭದ ಮಳೆಗಾಲದಲ್ಲಾದ್ರೆ ಆಲಿಕಲ್ಲು ಆಯೋ ಕೆಲಸನೂ ನಮ್ಮ ದಿನಚರಿ
ಸೇರ್ತಿತ್ತು, ಹಾಗೆ ಹೀಗೆ ಅನ್ನೋವಾಗ್ಲೇ ಕತ್ತಲಾಗ್ತಿತ್ತು. ಇನ್ನು
ಮಳೆಗಾಲದಲ್ಲಿ ಹಳ್ಳಿಗಳಲ್ಲಿ ಅದ್ರಲ್ಲೂ ಕಾಡಮಧ್ಯ ಇರೋ ಮನೆಗಳಲ್ಲಿ ಕರೆಂಟು,ಲೈಟು ಅಂದರೆ ಏನು ಅಂತ ಮರೆತುಹೋಗಿದ್ಯೇನೋ ಅನ್ನೋ
ಸ್ಥಿತಿ. ಆಗ ಹೊತ್ತಿಸ್ತಿದ್ದ ದೀಪದ ಬೆಳಕಲ್ಲಿ ದೀಪ ಇಟ್ಟಿರೋ ಜಾಗ ಒಂದ್ ಬಿಟ್ಟು ಬೇರೆ ಏನೂ
ಕಾಣ್ತಾ ಇರ್ಲಿಲ್ಲ ಆದರೆ ಆ ಕತ್ತಲಲ್ಲಿ ಹೊರಗೆ ಬರ್ರಂತ ಸುರಿತಿದ್ದ ಮಳೆ ಸದ್ದು,ಮಳೆ ಸ್ವಲ್ಪ ಕಡಿಮೆ ಆಯ್ತು ಅಂದ್ ತಕ್ಷಣ
ಚಿರ್ರ್....ಅಂತ ಚೀರ್ತಿದ್ದ ಜೀರುಂಡೆ ಸದ್ದು, ಟೊರ್ರ್..ಅಂತ
ಕೂಗ್ತಿದ್ದ ಕಪ್ಪೆಗಳ ಸದ್ದು,,,ಆಹಾ ಕಿವಿಗ್ ಹಬ್ಬ.
ಆ ಮಳೆಗಾಲದ ರಂಗನ್ನು ಹೆಚ್ಚು ಮಾಡ್ತಾ ಇದ್ದಿದ್ದು ಅಪ್ಪ,ಅಜ್ಜ ಚಿಕ್ಕಪ್ಪಂದಿರು ಹೇಳ್ತಾ ಇದ್ದ ಅವ್ರ ಕಾಲದ ಕಥೆಗಳು. ದೀಪದ ಬೆಳಕಲ್ಲಿ ಕೇಳ್ತಿದ್ದ ಅವರ ಸಾಹಸದ ಕಥೆಗಳು ಕಿವೀಲಿ ಇನ್ನೂ ಗುನುಗ್ತಾ ಇರತ್ತೆ.
ಕಗ್ಗತ್ತಲಲ್ಲಿ ಲಾಟೀನು ಹಿಡ್ಕೊಂಡು ಮೀನ್ ಹಿಡ್ಯಕ್ಕೆ ಹೋಗ್ತಿದ್ದಿದ್ದು, ಹಲ್ಸಿನಣ್ಣು ಕೀಳಕ್ಕೆ ಆಕಾಶದಷ್ಟೆತ್ತರದ ಮರನ ಹತ್ತಿದ್ದು,ಆಗ ಅಚಾನಕ್ಕಾಗಿ ದೊಡ್ಡ ಉಡವನ್ನ ತುಳ್ದಿದ್ದು,ಕಾಡದಾರೀಲಿ ಹೋಗುವಾಗ ಹುಲಿ, ಸಿಂಹ , ಚಿರತೆಗಳು ಸಿಕ್ಕಿದ್ದು, ಅವುನ್ನ ನೋಡಿ ಹೆದರಿ ಮರಹತ್ತಿ ಕೂತಿದ್ದು, ದೂರದಲ್ಲೆಲ್ಲೋ ಬೆಂಕಿ ನೋಡಿ ಕೊಳ್ಳಿದೆವ್ವ ಅನ್ಕೊಂಡಿದ್ದು, ಒಂದೂರಿಂದ ಇನ್ನೊಂದೂರಿಗೆ ನಡ್ಕೊಂಡು ಹೋಗ್ತಿದ್ದ ಅಪ್ಪಂದ್ರ ಹೆಗಲ ಮೇಲೆ ಸವಾರಿ ಮಾಡಿದ್ದು,ಅಣ್ಣ ತಮ್ಮಂದ್ರೆಲ್ಲ ಜಗಳ ಅಡ್ತಿದ್ದಿದ್ದು,ಕೊನೆಗೆ ದೊಡ್ಡೋರು ಕಂಬಕ್ಕೆ ಕಟ್ಟಾಕಿ ಬಾಸುಂಡೆ ಕೊಡ್ತಿದ್ದಿದ್ದು,,, ಹೀಗೆ ಆ ಕತ್ತಲ ರಾತ್ರಿ ನಾವ್ ಕೇಳಿರೋ ಕತೆಗಳು ಲೆಕ್ಕವಿಲ್ಲದಷ್ಟು.
ಅಷ್ಟೊತ್ತಿಗೆ ಕತೆ ಕೇಳ್ತಿದ್ದ ನಮಗೆಲ್ಲಾ ಜೋರು ಹಸಿವು ,ಹೇಗೋ ಬಿಸಿಬಿಸಿ ಊಟನು ತಯಾರಿರ್ತಿತ್ತು ಊಟ ಮಾಡಿ ಮಲ್ಗಿದ್ರೆ, ನೆಮ್ಮದಿಯ ನಿದ್ರೆ ನಮ್ಮ ಕಣ್ಣು ತುಂಬೋದು.ಬೋರ್ ಅಂತ ಅನ್ಸಿದ್ದ ಅ ಸಮಯ ಮಳೆ ಜೊತೆ ನಂಗಿರೋ ಒಂದು ಸುಂದರ ನಂಟನ್ನ ನೆನ್ಪು ಮಾಡ್ಕೊಳಕ್ಕೂ,ಆ ಪುಳಕವನ್ನ ಮೈಮನಗಳಲ್ಲಿ ತುಂಬಕ್ಕೂ ಅವಕಾಶ ಮಾಡಿತ್ತು.
ಹನಿ ಕುರುವರಿ
ತೃತೀಯ ಬಿ ಎ
ಕಟೀಲ್
ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
Comments
Post a Comment