ಅಂಕೆಯಿಲ್ಲದ ಲಂಕೇಶನ ಕದಡಿದ ಮನಸು
ನೀನಾಸಂ ನಮ್ಮ ಕೈ ಗಿತ್ತ ಬ್ಯಾಗ್ ನಲ್ಲಿದ್ದ ಎಲ್ಲವನ್ನು ನೋಡುತ್ತಾ ಬಂದ ನಮಗೆ ಸಿಕ್ಕಿದ್ದೆ "ದಶಾನನ ಸ್ವಪ್ನ ಸಿದ್ಧಿ" ಎಂಬ ಶೀರ್ಷಿಕೆಯ ಹಸ್ತಪ್ರತಿ (ಭ್ರೋಚರ್). ದಶಾನನ ಸ್ವಪ್ನಿಸಿದ್ದಿ ಕುವೆಂಪು ರಚಿತಾ ರಾಮಾಯಣ ದರ್ಶನ೦
ಕೃತಿಯಿಂದ ಆಯ್ದ ರಂಗ ಪ್ರಯೋಗ. ಅದನ್ನು ನೋಡಿದ ನಮ್ಮ ಮೊದಲ ಅನಿಸಿಕೆ "ಅದು ಸರಳ ರಗಳೆಯಲ್ಲಿರುವ ಕೃತಿ ನಮಗೆ ಅರ್ಥವಾಗುವುದು ಸ್ವಲ್ಪ ಕಷ್ಟವೇ!! ಎಂದು. ಆದರೆ ಅದರ ರಂಗ ಪ್ರಯೋಗವನ್ನು ನೋಡುತ್ತಾ ಹೋದ ನಮಗೆ ಕೊನೆಗೆ ಆದ ಅನುಭವವೇ ಬೇರೆ!!.
ಆಧುನಿಕ ಕನ್ನಡ ಸಾಹಿತ್ಯದ ಮಹೋನ್ನತ ಕೃತಿ.
ಮಹಾಕಾವ್ಯಗಳ ರಚನೆಯ ಯುಗ ಮುಗಿದೆ ಹೋಯಿತು ಎನ್ನುವಾಗಲೇ ಸೃಷ್ಟಿಯಾದ ಆಧುನಿಕ ಮಹಾಕಾವ್ಯ "ಶ್ರೀ ರಾಮಾಯಣ ದರ್ಶನ0". ಕುವೆಂಪುರವರ ಕಿರೀಟಕ್ಕೆ ಜ್ಞಾನಪೀಠವೆಂಬ ವಜ್ರವನ್ನು ಕೊಟ್ಟ ಕೃತಿ ಇದು.
"ದಶಾನನ ಸ್ವಪ್ನ ಸಿದ್ಧಿ" ಇಲ್ಲಿ ರಾವಣನು ನಮಗೆ ತೋರುವ ಬಗ್ಗೆ ಅದ್ಭುತ. ಅವನ ಮನಸ್ಸಿನ ಲಾಗುವ ವಿಭಿನ್ನ ಮಾರ್ಪಾಡುಗಳನ್ನು ಜಗದ ಮುಂದೆ ಇಡುವ ಪ್ರಯತ್ನ ಕವಿಯದ್ದಾದರೆ ಅದನ್ನು ರಂಗ ಪ್ರಯೋಗ ಮಾಡಿ ಎಲ್ಲರ ಕಣ್ಣುಗಳಿಗೆ ಕಟ್ಟುವಂತೆ ಮಾಡಿದ್ದು ನಿರ್ದೇಶಕರಾದ ಮಂಜು ಕೊಡಗು, ಮತ್ತು ತಂಡ.
ಈ ಸ್ವಪ್ನ ವಿಸ್ಮಯದಿಂದ ಹೊರಬಂದ ರಾವಣನು ಮಂಡೋದರಿಯನ್ನ ಕರೆಯುತ್ತಾನೆ ಆಗ ಬದಲಾದ ರಾವಣನು ಮಂಡೋದರಿಗೆ ಕಾಣುತ್ತಾನೆ. ತನಗಾದ ಅನುಭವವನ್ನು ಮಂಡೋದರಿಯ ಮುಂದೆ ವ್ಯಕ್ತಪಡಿಸುತ್ತಾನೆ. ಸೀತೆಯಲ್ಲಿ ತನಗಿರುವ ಈಗಿನ ಭಾವವನ್ನು ತಿಳಿಸುತ್ತಾನೆ. ಅವನ ಆತ್ಮ ಮನಸ್ಸು ದೈವಿಕ ನೆಲೆಯಲ್ಲಿ ನಿಲ್ಲುತ್ತದೆ." ನನಗೆ ರಾಮನ ಕೊಲ್ಲುವುದಲ್ಲ ಗುರಿ ಸೀತಾಶುಭೋದಯಕೆ ಗೆಲ್ಲುವುದಲ್ಲದೆ ಕೊಲ್ಲುವುದಲ್ಲ". ಮಂಡೋದರಿಯನ್ನ ಬೀಳ್ಕೊಡುತ್ತಾನೆ ಅಂದಿನ ಬೆಳಗು ರಾವಣನ ಪಾಲಿಗೆ ಜೇನಿನ ಮಳೆ ಸುರಿದಂತೆ, ಸೊಬಗಾಗಿ ಕಾಣುತ್ತದೆ. ನಾಳ ನಾಳದಲ್ಲಿ ಅಮೃತತ್ವ ಪಸರಿಸುತ್ತದೆ.
ಕಥೆ ಹೀಗಿದ್ದರೆ ಇದರ ರಂಗ ಪ್ರಯೋಗ ನೋಡುಗರನ್ನು ಒಂದೊಮ್ಮೆ ಚಕಿತವು , ಮೂಕವಿಸ್ಮಿತವು ಮಾಡುವುದರಲ್ಲಿ ಎರಡು ಮಾತಿಲ್ಲ. ಇದರ ವಿನ್ಯಾಸ ನಿರ್ದೇಶನ ಮಂಜು ಕೊಡಗುರವರದ್ದು ಇದರ ಪ್ರಯೋಗವನ್ನು ಇಬ್ಬರು ವೃತ್ತಿಪರ ನಟ ಅವಿನಾಶ್ ರೈ ಮತ್ತು ನಟಿ ಶ್ವೇತಾ ಅರೆಹೊಳೆಯವರದ್ದು. ಅವರು ಮಾಡಿದ ಅಭಿನಯ ನನ್ನ ಕಣ್ಣುಗಳಲ್ಲಿ ಇನ್ನು ಕಟ್ಟಿದ ಹಾಗೆ ಇದೆ. ಎಲ್ಲಾ ಪಾತ್ರಗಳು ಇವರಿಬ್ಬರೇ ಅತ್ಯಂತ ನಾಜೂಕಾಗಿ ಮತ್ತು ಆಕರ್ಷಕವಾಗಿ ಮಾಡಿ ಎಲ್ಲರ ಗಮನವನ್ನು ಸೆಳೆಯುತ್ತಾರೆ.
ಇನ್ನು ಕಾಳಿಕಾದೇವಿ, ಲಂಕಾಲಕ್ಷ್ಮೀ, ಸೀತೆ ,ದುರ್ಗೆ, ಮಂಡೋದರಿ ಈ ಎಲ್ಲಾ ಪಾತ್ರಗಳನ್ನು ನೋಡುಗರು ಕುಳಿತಲ್ಲೇ ಅಚ್ಚರಿಯಾಗುವಂತೆ ಮಾಡಿದ ಕೀರ್ತಿ ಶ್ವೇತಾ ಅರಹೊಳೆಯರವರದ್ದು. ನನಗೆ ರೆಡಿಯಾಗೋಕೆ ಒಂದು ಗಂಟೆ ಬೇಕಪ್ಪ ಅನ್ನು ಈಗಿನ ಕಾಲದ ಹುಡುಗಿಯರಿಗೆ ಕಪಾಳ ಮೋಕ್ಷ ಮಾಡುವಂತಿದ್ದದ್ದು ಅವರು ತಯಾರಾಗಲು ತೆಗೆದುಕೊಳ್ಳುತ್ತಿದ್ದ ಸಮಯ. ನಾಟಕದಲ್ಲಿ ತಮಗೆ ನೀಡಿದ ಎಲ್ಲಾ ಪಾತ್ರಗಳನ್ನು ನಿರ್ವಹಿಸುತ್ತಾ ಒಂದೊಂದು ಪಾತ್ರಕ್ಕೂ ವಿಭಿನ್ನ ಮತ್ತು ವಿಜೃಂಭಣೆಯ ವೇಷ ಭೂಷಣಗಳನ್ನ ತೊಡಲು ಅವರು ತೆಗೆದುಕೊಳ್ಳುತ್ತಿದ್ದ ಸಮಯ ನಿಮಿಷಗಳಷ್ಟೇ!! ನಾಟಕದಲ್ಲಿ ಎಲ್ಲೂ ಕೂಡ ಲೋಪಭಾರದಂತೆ ಸಮಯಪ್ರಜ್ಞೆಯಿಂದ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮತ್ತು ಬಹು ಆಕರ್ಷಣೀಯವಾಗಿ ತೆರೆಯ ಮೇಲೆ ವ್ಯಕ್ತಪಡಿಸಿದರು. ಸೀತೆಯ ಪಾತ್ರವನ್ನು ಕೂಡಿಯಾಟ್ಟಮ್ ಪ್ರಕಾರದಲ್ಲಿ ವಿನ್ಯಾಸ ಮಾಡಿದ ರೀತಿ ಬಹಳ ಆಕರ್ಷಣೀಯವಾಗಿತ್ತು.
ಇದೆಲ್ಲದರ ಸೂತ್ರಧಾರಿಗಳಾದ ಮಂಜು ಕೊಡಗು ಅವರಿಗೆ ಒಂದು ಚಪ್ಪಾಳೆ ಸಲ್ಲಲೇ ಬೇಕು, ಕುವೆಂಪುರವರ ಕಾವ್ಯಗಳನ್ನು ನಾಟಕ ರೂಪದಲ್ಲಿ ತೆರೆ ಮೇಲೆ ತರುವುದು ಕಷ್ಟ ಎಂಬ ಪದಕ್ಕೆ ವಿರುದ್ಧವಾಗಿ ನಾಟಕವನ್ನು ವಿನ್ಯಾಸಗೊಳಿಸಿ , ನೋಡುಗರ ಕಣ್ಮನ ಸೆಳೆದ ಕೀರ್ತಿ ನಿರ್ದೇಶಕರುದ್ದು.
ಓಟ್ಟಿನಲ್ಲಿ ನಾಟಕವು ರಂಗಾಸಕ್ತರ ಮನಸ್ಸನ್ನು ಸೆಳೆಯುವುದರಲ್ಲಿ ಬೇರೆ ಮಾತೇ ಇಲ್ಲ!!!
ಸಂಧ್ಯಾ ಕೆ.ಕೆ, ತೃತೀಯ ಬಿ. ಎ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜ್

Comments
Post a Comment